ದೇವಯಾನ -
	ಈ ಪದದ ಸಾಮಾನ್ಯಾರ್ಥ ದೇವರ ರಥ (ಯಾನ) ಎಂದು. ಈ ಪದ ಮೊಟ್ಟ ಮೊದಲಿಗೆ ವೇದಗಳಲ್ಲಿ ಕಂಡುಬರುತ್ತದೆ. ಅನಂತರ ಇದನ್ನು ಕವಿಗಳೂ ಪುರೋಹಿತರೂ ಬಳಸುತ್ತ ಬಂದಿದ್ದಾರೆ.
ಋಗ್ವೇದದ ಮಂತ್ರಗಳಲ್ಲಿ ಬರುವ ದೇವಯಾನ ಪದ ಅಗ್ನಿದೇವತೆಗೆ ಸಂಬಂಧಿಸಿದ್ದಾಗಿದೆ. ಅಗ್ನಿಯನ್ನು ದೇವತೆ ಹಾಗೂ ಮಾನವರ ನಡುವಿನ ದಿವ್ಯ ರಾಯಭಾರಿ ಎಂದು ಇಲ್ಲಿ ವರ್ಣಿಸಲಾಗಿದೆ.

ಕೃಷ್ಣದ್ವೈಪಾಯನ ರಚಿತ ಬ್ರಹ್ಮಸೂತ್ರಗಳಲ್ಲಿ ದೇವಯಾನ ಮಾರ್ಗ ಎಲ್ಲ ವಿದ್ಯೆಗಳಿಂದಲೂ ದೊರೆಯುವುದಿಲ್ಲ ಎಂದು ಹೇಳಿದೆ. ನಿರ್ಗುಣ ಬ್ರಹ್ಮವಿದ್ಯೆಯನ್ನು ಹೇಳುವಾಗ ಈ ಪದ ಬಳಕೆಯಾಗಿಲ್ಲ. ಏಕೆಂದರೆ ಅದು ಸುಗುಣೋಪಾಸಕರಿಗೆ ಮಾತ್ರ ಹೇಳಿಸಿದ್ದು.

	ದೇವಯಾನಕ್ಕೆ ಪ್ರತಿಯಾಗಿರುವುದು ಪಿತೃಯಾನ. ವಿದ್ಯುಕ್ತವಾಗಿಯೇ ಸಕಾಮಕರ್ಮವನ್ನು ಎಸಗಿದವರು ಅದಕ್ಕೆ ಅನುಗುಣವಾಗಿ ಊದ್ರ್ವಲೋಕಗಳಲ್ಲಿ ಭೋಗವನ್ನು ಅನುಭವಿಸುತ್ತಾರೆ. ಅವರ ಕರ್ಮ ಮಾರ್ಗಕ್ಕೆ ಪಿತೃಯಾನ ಎಂದು ಹೆಸರು. ಪುಣ್ಯ ಮುಗಿದ ಮೇಲೆ ಅವರು ಪುನರ್ಜನ್ಮ ಹೊಂದುತ್ತಾರೆ. ದೇವಯಾನದಲ್ಲಿ ಹೋಗುವವರು ಮುಕ್ತರು, ಅವರಿಗೆ ಪುನರಾಗಮನವಿಲ್ಲ.
(ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ